ಸರ್ವಜ್ಞನ ವಚನಗಳು ( ತ್ರಿಪದಿಗಳು )
೧.
ನಂದಿಯನು ಏರಿದನ
ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
ಮುಂದೆ ಹೇಳುವೆನು ಸರ್ವಜ್ಞ
೨.
ಮುನ್ನ ಕಾಲದಲಿ ಪನ್ನಗಧರನಾಳು
ಎನ್ನೆಯ ಪೆಸರು, ಪುಷ್ಪದತ್ತನು ಎಂದು
ಮನಿಪರು ದಯದಿ ಸರ್ವಜ್ಞ
೩.
ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ
ಮುದವ ಸಾರೆ, ಸರ್ವಜ್ಞನೆಂದೆನಿಸಿ
ನಿಂದವನು ನಾನೆ ಸರ್ವಜ್ಞ
೪.
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ ಪಟದೊಳಗೆಯಿರುವಾತ
ತಣ್ಣೊಳಗೆ ಇರನೇ ಸರ್ವಜ್ಞ
೫.
ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
ಕುಲವನರಸುವರೆ ಸರ್ವಜ್ಞ
೬.
ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ
೭.
ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ
೮.
ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗೆ
ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ
೯.
ಊರಿಂಗೆ ದಾರಿಯನು ಆರು ತೋರಿದರೇನು?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು? ಸರ್ವಜ್ಞ
೧೦.
ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
ಪರದೇಶಿಯಂತೆ ಇರುತಿರ್ಪಯೋಗಿಯನು
ಪರಮಗುರುವೆಂಬೆ ಸರ್ವಜ್ಞ
೧೧.
ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರನು ಓರ್ವನೇ
ನರ ದೈವವೆಂಬೆ ಸರ್ವಜ್ಞ
೧೨.
ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರಾ ಗುರುವಿಗಿಂತ
ಬಂಧುಗಳುಂಟೆ ಸರ್ವಜ್ಞ
೧೩.
ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ
ಮಾಯನಾಶವನು ಹರಿಸುತ್ತ ಶಿಷ್ಯಂಗೆ
ತಾಯಿಯಂತಾದ ಸರ್ವಜ್ಞ
೧೪.
ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ. ಗುರುರಾಯ
ಬಂಧನವ ಕಳೆವ ಸರ್ವಜ್ಞ
೧೫.
ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು
ಗುರುತೋರ್ವ ದೈವದೆಡೆಯನು ದೈವತಾ
ಗುರುವ ತೋರುವನೇ? ಸರ್ವಜ್ಞ
೧೬.
ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರಮನೆಯಕ್ಕು ಸರ್ವಜ್ಞ
೧೭.
ಒಂದರೊಳಗೆಲ್ಲವು ಸಂದಿಸುವದನು ಗುರು
ಚಂದದಿಂ ತೋರಿಕೊಡದಿರಲು ಶೊಷ್ಯನವ
ಕೊಂದನೆಂದರಿಗು ಸರ್ವಜ್ಞ
೧೮.
ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ
ಲಿಂಗದೊಳು ಜಗವು ಅಡಗಿಹುದು ಲಿಂಗವನು
ಹಿಂಗಿದವರುಂಟೆ? ಸರ್ವಜ್ಞ
೧೯.
ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ
ಕೇಶವನು ಭಕ್ತರೊಳಗೆಲ್ಲ ಮೂರು ಕ
ಣ್ಣೇಶನೆ ದೈವ ಸರ್ವಜ್ಞ
೨೦.
ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
ಶಂಭುವಿರಲಿಕ್ಕೆ ಮತ್ತೊಂದು ದೈವವ
ನಂಬುವನೇ ಹೆಡ್ಡ ಸರ್ವಜ್ಞ
೨೧.
ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು
ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು
ನಂಜಿನಂತಕ್ಕು ಸರ್ವಜ್ಞ
೨೨.
ಎಂಜಲೂ ಅಶೌಚ
ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ
ರಂಜನನ ನೆನೆಯೊ ಸರ್ವಜ್ಞ
No comments:
Post a Comment
Write Something about PK Music